ಋಷ್ಯಮೂಕ
	
ಋಷ್ಯವೆಂಬ ಮೃಗಜಾತಿ ನಾಲಗೆಯನ್ನು ಕಳೆದುಕೊಂಡ ಜಾಗ. ಪಂಪಾಸರೋವರ ಮುಂಭಾಗದಲ್ಲಿರುವ ಪರ್ವತವಿದು. ಬಳ್ಳಾರಿ ಜಿಲ್ಲೆಯ ಆನೆಗೊಂದಿಯಿಂದ ಸುಮಾರು ಎಂಟು ಮೈಲಿ ದೂರದಲ್ಲಿ ತುಂಗಭದ್ರೆಯ ತೀರದಲ್ಲಿದೆಯೆಂದು ಹೇಳಲಾಗಿದೆ. ಋಕ್ಷರಜಾ ಎಂಬವನ ಮಗನಾದ ಸುಗ್ರೀವ ತನ್ನ ಅಣ್ಣನಾದ ವಾಲಿಯೊಡನೆ ವೈರ ಬೆಳೆದಾಗ ಆತ್ಮರಕ್ಷಣೆಗಾಗಿ ನಾಲ್ವರು ಆಪ್ತ ಕಪಿಗಳೊಡನೆ ಇಲ್ಲಿ ವಾಸವಾಗಿದ್ದ. ಶ್ರೀರಾಮನ ಮಡದಿಯಾದ ಸೀತೆಯನ್ನು ರಾವಣ ಅಪಹರಿಸಿದಾಗ ಅವಳನ್ನು ಹುಡುಕಲು ಹೊರಟಿದ್ದ ರಾಮಲಕ್ಷ್ಮಣರು ಕಬಂಧ ಎಂಬ ರಾಕ್ಷಸನಿಂದ ಸುಗ್ರೀವನ ವಿಚಾರವನ್ನು ಕೇಳಿ ಅವನನ್ನು ಸ್ನೇಹ ಮಾಡಿಕೊಳ್ಳಲು ಯೋಚಿಸುತ್ತಿರುವಾಗ ಆಂಜನೇಯನ ಮೂಲಕ ಇಲ್ಲಿಗೆ ಬಂದು ಕೆಲವುಕಾಲ ವಾಸವಾಗಿದ್ದರು. ಇದು ಅತ್ಯಂತ ರಮಣೀಯವೂ ಪವಿತ್ರತೆಯಿಂದ ಕೂಡಿದುದೂ ಹೃದಯಕ್ಕೆ ನೆಮ್ಮದಿಯನ್ನು ತರುವಂಥದೂ ಆಗಿದ್ದು ಮೃಗಪಕ್ಷಿಗಳ ಆವಾಸಕ್ಕೂ ಋಷಿ ಮುನಿಗಳ ತಪಸ್ಸಿಗೂ ಬಹು ಯೋಗ್ಯವಾದ ಸ್ಥಳವೆಂದು ವರ್ಣಿತವಾಗಿದೆ. ಇದಕ್ಕೂ ಇದರ ಒಂದು ಭಾಗಕ್ಕೂ ಮಲಯವೆಂಬ ಹೆಸರಿದ್ದಿರಬೇಕೆಂದು ರಾಮಾಯಣದಿಂದ ಗೊತ್ತಾಗುತ್ತದೆ. ಇಲ್ಲಿಯೇ ರಾಮ-ಸುಗ್ರೀವರಿಬ್ಬರಿಗೂ ಅಗ್ನಿಸಾಕ್ಷಿಕಸಖ್ಯವೂ ಸಿದ್ಧವಾಯಿತು. ಸೀತಾಪಹಾರಣವಾಗುವಾಗ್ಗೆ ಆಕಾಶಮಾರ್ಗದಲ್ಲಿ ಸಾಗುತ್ತಿದ್ದ ಸೀತೆ ತನ್ನ ವಸ್ತ್ರಾಭರಣವನ್ನು ಗಂಟುಕಟ್ಟಿ ಈ ಪರ್ವತದ ನೇರದಲ್ಲೇ ಕೆಳಕ್ಕೆ ಬಿಸುಟಳು. ಶ್ರೀರಾಮ ವಾಲಿವಧಕ್ಕಾಗಿ ಇಲ್ಲಿಂದಲೇ ಹೊರಟ. ಇದು ಕೂರ್ಮ ವಿಭಾಗ ಬೃಹತ್ಖಂಡದಲ್ಲಿ ಲಂಕೆಯ ದಕ್ಷಿಣ ಭಾಗಕ್ಕೆ ಸೇರಿದೆಯೆಂದು ಹೇಳಿದೆ.								 
  (ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ